Tuesday, August 3, 2010

ಮರಳ ತೀರದ ಸಂಜೆ

ತಿಳಿಸಂಜೆಯಾಗಿದೆ
ನಸುಗತ್ತಲು ಕವಿದಿದೆ
ಮರಳ ಹಾಸಿಗೆ ತಲೆಯಾನಿಸಿ
ಸುಮ್ಮನೆ ಮಲಗಿರುವೆ
ಬಯಕೆ ತೀರದ ದಿನ ಕಳೆಯಿತೆಂದು
ಮರುಗಿ ಮುಲುಗಿರುವೆ
ಯಾಕೋ ಯೋಚನೆ
ಸೊಂಪು ಪೈರಿನ ನಡುವೆ ಬೆಳೆದ ಕಳೆಯಂತೆ
ಕಾಡುತಿದೆ ಅಗಲದ ನೆರಳಿನಂತೆ
ತಂಗಾಳಿಯೊಂದು ಮೆಲ್ಲನೆ ಬೀಸಿರಲು
ಕೊಂಚ ತಂಪನೆಯ ಅನುಭವ
ಸುಮ್ಮನೆ ಕಳೆದಂತೆ ಬಿಡಿಸಲು ಬಾರದ ಗೋಜಲು

ಸಕ್ಕರೆ ಮರಳಿಗೆ
ಕಾಲು ತಾಕಿಸಿ ನಡೆದಿರುವೆ
ಕಪ್ಪು ಕತ್ತಲಿನ ನಡುವೆ ಮೆಲ್ಲನೆ ಸರಿದಿರುವೆ

Monday, August 2, 2010

ಮರೀಚಿಕೆಯ ಹುಡುಕುತ

ಕಾಡ ಮಲ್ಲಿಗೆ ಅರಳಿದಂತೆ ನೀ ನಗುತಿರಲು
ನಾಚಿ ಬಳುಕುತಿದೆ ನಿನ್ನ ಮುಂಗುರುಳು
ಗುಳಿಕೆನ್ನೆಗಳ ಹೊಳಪು
ಮಂದಹಾಸವೊಂದು ಸುಳಿದಿರಲು
ನಗು ಕಪಟವೋ,ದಿಟವೋ
ಅರಿಯಲಾಗದ ಗೋಜಲು
ಮತ್ಸ್ಯ ಕನ್ಯೆಯಂತೆ ಬಳುಕಿ ನೀ ಬಂದಿರುವೆ
ತಂಗಾಳಿಯೊಂದು ಸೋಕಿದಂತೆ ನಾ ನಿಂತಿರುವೆ
ಹಿತವಾಗಿದೆ ಮನಸಿಗೆ
ಮರೆತಿರಲು ತನ್ನತನದ ಪರಿವೆ
ನೀ ನನ್ನ ನೋಡುತಿರುವೆ
ಕಣ್ಣ ಸನ್ನೆಯಲಿ ಸನಿಹಕೆ ಕರೆದಿರುವೆ

ನಾ ನಿನ್ನೆಡೆಗೆ ನಡೆದಿರುವೆ
ಕಳೆದಿರುವೆ ನೀನು ಮರೀಚಿಕೆಯಂತೆ
ಸುಳಿದು ಮರೆಯಾಗಿರುವೆ
ರೂಪಸಿ ಕಾಡಬೆಳದಿಂಗಳಿನಂತೆ